ಹೆಸರಿಲ್ಲದ ಚರಿತ್ರೆ - ಕಾಲಯಾನ 2025
ಒಂದು ಪ್ರೇಮಕತೆ
ತೋಟದ ಮುತ್ತಜ್ಜ ಕಲ್ಲು
ಚಳಿಗೆ ಮುದುಡಿ ಮಲಗಿದ್ದ ಸಮಯ
ಕಾಲಯಾನದ ಗುಂಡಿ ಒತ್ತುವ ಸಮಯ
ಸರಿ ಸಮಯದಲ್ಲೇ
ಅಲ್ಲೇ ಎಲ್ಲೋ ಇದ್ದ
ಆ ಗಂಡ ಹೆಂಡತಿ ಕಾಣುತ್ತಿಲ್ಲ
ಅವನ ಶೌರ್ಯ ಏನು ಕಮ್ಮಿಯಲ್ಲ
ಆದರೇನು ಬದುಕಿ ಉಳಿಯಲಿಲ್ಲ ಅಷ್ಟೇ
ಅದಕ್ಕೆ ಅಲ್ಲವೇ ಊರವರೆಲ್ಲಾ
ಸೇರಿ ಅವನಿಗೊಂದು ವೀರಗಲ್ಲ ಕೆತ್ತಿದ್ದು
ಸಾಮಾನ್ಯರ ನಡುವಿನ ಸಾಮಾನ್ಯನೊಬ್ಬನ
ಅಸಾಮಾನ್ಯ ಶೌರ್ಯ ಆಗಲಿ
ಎಲ್ಲರಿಗೂ ಪ್ರೇರಣೆ ಎಂದು
ತಾಳಿ ತಾಳಿ ಅದೇ ಕಲ್ಲಿಗೆ ಸೇರಿಸಿಲಿಲ್ಲವೇ
ಅವನ ಸತಿಯನ್ನು .
ಹೋಗಿಬಿಟ್ಟಳಲ್ಲ ಅವನ ಜೊತೆ
ಪರಿ ಪರಿಯಾಗಿ ಹೇಳಲಿಲ್ಲವೇ
ಊರವರೆಲ್ಲ “ಕಾಲಕ್ಕಿಂತ ದೊಡ್ಡ ಔಷಧಿಯಿಲ್ಲ”
ಉಸಿರಾಗಿದ್ದವನ ಉಸಿರಿಲ್ಲದೆ ಉಸಿರಾಡಲು ಅಂತ ।
ಕೇಳಲಿಲ್ಲ ಅಷ್ಟೇ …
ಹೊರಟೇ ಬಿಟ್ಟಳು
ಹಿಂತಿರುಗಿ ನೋಡದೆ !
ಹೆಸರೂ ಗೊತ್ತಿಲ್ಲದ ಅವನು,
ಅವನಿಗೆ ಉಸಿರಾದ ಅವಳು.
ಇನ್ನು ನಿಂತಿದ್ದಾರೆ
ಅಂದಿನಿಂದ-ಇಂದಿನವರೆಗೆ,
ಬಹುಶಹ ಎಂಟು ಶತಮಾನಗಳಿಂದ
ಇತ್ತೀಚೆಗೆ,
“ಕೋಲೆ ಬಸವ”ನೂ
ಸೇರಿಕೊಂಡಿದ್ದಾನೆ
ಅವರೆಲ್ಲ ಕತೆಗಳಿಗೆ
ಮೂಕ ಸಾಕ್ಷಿಯಂತೆ,
ಎಲ್ಲವನ್ನೂ ಕೇಳುತ್ತಾ, ನೋಡುತ್ತಾ
ಯಾರಿಗೂ ಹೇಳಲಾಗದ
ಕತೆಯನ್ನೇ ಮೆಲಕು ಹಾಕುತ್ತಾ
ಇರಲಿ ಇವರದೊಂದು ಶೌರ್ಯದ
ಪ್ರೇಮಕತೆ ನಮ್ಮ ಜೊತೆ !!
ಹೆಸರಿನ ಹಿಂದೆ
ಕಾಲಯಾನದ ಮುಂದಿನ ಪಯಣ
ಕರೆದೊಯ್ಯುವುದು ಎಲ್ಲಿಗೋ
ನೋಡೇ ಬಿಡುವ.
ಕಾಯುತ್ತಿತ್ತೆ ಸಾವಿರ ವರುಷಗಳಿಂದ
ದೇವಳದ ಆ ಗೋಪುರ
ಹೇಳಲೊಂದು ಊರಿನ ಹೇಸರ
ಏನು ಇನ್ನೊಮ್ಮೆ ಹೇಳಿ
“ವೆಂಗಳೂರ್” ಅಂದಿರಾ?
ಸರಿಯಾಗಿ ನೋಡಿ
ಅದು “ಬೆಂಗಳೂರು” ಇರಬೇಕು.
ಕನ್ನಡದಲ್ಲಿ ನಾವು ಹಾಗೇ ಬರೆಯುವುದು
“ನಮ್ಮೂರು ಬೆಂಗಳೂರು”…
ಬ್ಯಾಂಗ್ಲೂರೂ ಅಲ್ಲ
ವೆಂಗಳೂರು ಅಲ್ಲ !
ನೆನಪರಿಲಿ ನಿಮಗೆ ।
ಸ್ವಲ್ಪ ತಾಳಿ …
ಅದು ತಮಿಳನಲ್ಲಿ ಬರೆದಿದ್ದು
ಅದರಲ್ಲಿ ಇರುವುದೇ ಹೀಗೆ
ಸಾವಿರ ವರುಷದಿಂದ !!
ಅದೇ ಅಲ್ಲವೇ ನನ್ನ ಹೆಸರಿಗೆ ಇರುವ
ಹಳೆಯದೊಂದು ಪುರಾವೇ?!
ಹೌದಲ್ಲ …
ಈ ತಮಿಳರೆ ಹೀಗೆ “ಬೆ”ಎಲ್ಲ “ವೆ” ಅವರಿಗೆ!
ಇರಲಿ ಬಿಡಿ,
ಸಾವಿರ ವರುಷದ ಹಿಂದೆಯೂ
ನಮ್ಮೊಂದಿಗೆ ನಮ್ಮವರೇ ಆಗಿ ಇದ್ದವರಲ್ಲವೇ ಅವರು
ನಮ್ಮದೇ ಊರಿನ ಹೆಸರ ಕೆತ್ತಿ ಇಟ್ಟಿದ್ದಾರಲ್ಲ ನಮಗಾಗಿ
ಹೆಸರಲ್ಲೇನಿದೆ
ವೆಂಗಳೂರು…ಬೆಂಗಳೂರು…
ಏನಾದರೇನು ಹೆಸರು…
ಈ ಊರು ನಮ್ಮ ಉಸಿರು !!
*ಕಲ್ಲು ಕರುಗುವ ಸಮಯ*
ಕಾಲದ ಓಟ ಮುಂದುವರೆಯಲಿ
ಮುಂದೆ ಏನು ಇರುವುದು,
ಸಮಯದ ಪದರದಲಿ !!
ವೀರನೇ ಸರಿ ಅವನು
ಅದೇನು ಸಾಮಾನ್ಯ ಹುಲಿಯೇ !!
ಹೆಬ್ಬುಲಿಯೇ ಇರಬೇಕು.
ನೋಡಿ, ಗಾತ್ರವ
ಮನುಷ್ಯನನ್ನು ಬಿಡುತ್ತಿತಲಿಲ್ಲವಂತೆ.
ಅದಕ್ಕೆ ಅಲ್ಲವೇ...
ಊರಿಗೆ ಊರೇ ಹೆದರಿದ್ದು.
ಇವನೆಲ್ಲಿದ್ದ ?
ಯಾವ ದೈವ ಬಂದಿತ್ತೋ? ಅವನ ಮೇಲೆ
ಒಮ್ಮೇಲೆ...ನುಗ್ಗಿ ಬಿಡುವುದೇ,
ಹಸಿದ ಹೆಬ್ಬುಲಿಯ ಮೇಲೆ !
ಸ್ವಲ್ಪವೂ ಹೆದರಿಕೆ
ಇರಲಿಲ್ಲವೇ ಅವನಿಗೆ
ಹೊಡದೆ ಹಾಕಿ ಬಿಟ್ಟನಲ್ಲ
ಹುಲಿಯ
ಅದರೊಂದಿಗೆ ನಮ್ಮೊಳಗಿದ್ದ ಹೆದರಕೆಯ !!
ಅಯ್ಯೋ.....ಆಯ್ಯೊಯ್ಯೋ...
ಪಾಪಿ ಹುಲಿಯ ಉಗುರು
ನಾಟೆ ಬಿಟ್ಟಿತ್ತಲ್ಲ
ಆವನೆದೆಗೆ,
ಅಲ್ಲ ಅಲ್ಲ ...
ನಮ್ಮೆಲ್ಲರ ಎದೆಗೆ!!
ಅವನು ಸತ್ತಿರಬಹುದು
ಸತ್ತು ಬದುಕಿಸಿದ್ದಾನೆ
ನಮ್ಮೆಲ್ಲರನ್ನೂ,
ಆ ಹೆದರಕೆಯ ನರಕದಿಂದ !
ಸತ್ತರೇನು ?
ಇರಬೇಕು.. ನಮ್ಮ ನಡುವೆ
ಊರ ಹೆಮ್ಮೆಯಾಗಿ,
ನಮ್ಮೆಲ್ಲರಿಗೆ
ಮಾದರಿಯಾಗಿ.
ಎಷ್ಟು ನೂರು …
ಎಂಟಿರ ಬೇಕು
ಅಂದಿನಿಂದಲೂ
ಅಲ್ಲೇ ಎಲ್ಲೋ ನಿಂತಿದ್ದಾನೆ.
ನಮ್ಮಂತಹ ಸಾಮಾನ್ಯರ
ಉಸಿರಿಗೆ ಉಸಿರಾಗಿ!!
ಅದಕ್ಕೆ ಅನಿಸುತ್ತೆ ಅವನು
ಮೊದಲ ಇಡ್ಲಿಯನ್ನು
ಇವನಿಗೆ ಅರ್ಪಿಸುತ್ತಿದ್ದದ್ದು
ಚಳಿಗಾಳಿಗೆ, ಮೈ ಒಡ್ಡಿ ನಿಂತಿದ್ದ
ಆ ಕಲ್ಲಿಗೊಂದು
ಗುಡಿಯ ಕಟ್ಟಿದ್ದು
ಕಲ್ಲಾದರೇನು ಕರಗಿರಬೇಕು,
ಅವನ ಹೃದಯ
ಸಾಮಾನ್ಯನೊಬ್ಬನ ಈ ಅಸಾಮಾನ್ಯ ಪ್ರೀತಿಗೆ !!
ಕಾಲಯಾನ ಅಲ್ಲವೇ ಇದು
ಅಂತರೀಕ್ಷ ಪಯಣದಂತೆ
ಹಗುರಾಗವ ಕನಸ ಕಂಡಿದ್ದೆ
ಇರಲಿ ಬಿಡಿ,
ಪ್ರೀತಿಯ ತೂಕದ ಭಾರ
ಹೆಚ್ಚಾದರೂ ಓಡುವೆವು ಮುಂದೆ
ಕಾಲದ ಇನ್ನೊಂದು ಮಜಲಿನ ಹಿಂದೆ!
ಕೂಡವ ದಾರಿ
ಇದೇನಿದು...
ಸೇರುವ ನಾಲ್ಕು ದಾರಿಗೂ
ಒಂದೊಂದು ದೇವಾಲಯವೇ ?
ಏನು ?
ದಾರಿ ಯಾವುದಾದ್ರೂ
ಗುರಿ ಗಮ್ಯದೆಡೆಗೆ ಇದ್ದರೆ ಸಾಕು,
ತಲಪುವುದು ಶತಸಿದ್ದ .
ಅಂತಲೇ ಅದರ ಗೂಡಾರ್ಥ !
ಅಗ್ರಹಾರದ
ಈ ಓಣಿ
ವಿಶ್ವ ವಿದ್ಯಾಲಯವೇ
ಆಗಿರಲಿಲ್ಲವೇ
ಅಂದು ….
ಎಂದು ?
ಸಾವಿರವೋ ಅಥವಾ ಇನ್ನೊಂದು ಇನ್ನೂರೋ
ವರುಷವೋ ಹಿಂದೆ ಇರಬೇಕು.
ಲೆಕ್ಕವಿಟ್ಟವರು ಯಾರು?
ಅಲ್ಲೇ... ಹಿಂದೆ ಸರ್ಕಾರದ ಶಾಲೆಯಲ್ಲಿ
ಓದುವ, ಎಳೆ ಹಸುಳೆಗಳಿಗೆ ಗೊತ್ತೆ?
ಈ ಸಾವಿರಕ್ಕೂ...
ಹೆಚ್ಚಿನ ವರುಷಗಳ ಲೆಕ್ಕ?
ಅವರ ಶಾಲೆಯ ಬುನಾದಿ
ಅಂದಿನ ವಿಶ್ವ ವಿದ್ಯಾಲಯದ
ಎಡೆಯಲ್ಲೇ ಅಂತ ?
ಗೊತ್ತಿರಲಾರದು ಬಿಡಿ.
ಇರಬೇಕು ಶಾಲೆಯಲ್ಲಿ ಅವರದೇ ಗಡಿಬಿಡಿ,
ಸಾಧ್ಯವಾದರೇ ...
ನಾವೇ ತಿಳಿಸೋಣ ಬಿಡಿ !!
ಅದೇನದು ?
ಅದೇ ಅಲ್ಲವೇ ಕೆರೆ
ಅದೇನು ಬರೀ ಅಗ್ರಹಾರದ್ದೇ ?
ಅಲ್ಲೇ ಅಲ್ಲವೋ ಆ ರಾಜ
ಹೂಳೆತ್ತಿದ್ದಕ್ಕೂ , ಅದೆಂತಹದೋ ನೀರ್ಬಾಗಿಲ ಸರಿಪಡಿಸಿದ್ದಕ್ಕೋ...
ದಾನ ಕೊಟ್ಟಿದ್ದು,
ಅಷ್ಟೇ ಯಾಕೆ
ಅದಕ್ಕೊಂದು
ಕಲ್ ಕೆತ್ತನೆ ಮಾಡಿಸಿದ್ದು,
ನಮಗೂ ಅನಿಸಲಿಲ್ಲವೇ
ಮಾಡಿದರೆ ಇಂತಹದ್ದೇ
ಕೆಲಸ ಮಾಡಬೇಕು
ಅರಸನ ಮನ ಗೆಲ್ಲುವ
ದಾನದಿಂದ ಮನೆ
ತುಂಬಿಕೊಳ್ಳುವ ಕೆಲಸ ಅಂತ !
ಸರಿ ಸರಿ ಹೊರಡೋಣ ಬನ್ನಿ
ಮುಂದಕ್ಕೆ
ಅಂದರೆ….
ಇನ್ನೊಂದಷ್ಟು ಹಿಂದಕ್ಕೆ !!
ಈ ಕಾಲಾಯನವೇ ಹೀಗೆ ಅನಿಸುತ್ತೆ
ದಿಕ್ಕು....ದಾರಿ..
ಒಮ್ಮೊಮ್ಮೆ ಗಲಿಬಿಲಿ
ಇರಲಿ ಬಿಡಿ …
ಇದೆಲ್ಲವೂ ಇದ್ದದ್ದೇ
ಇವತ್ತೂ ಅವತ್ತೂ!
ಹೆಸರಲ್ಲಿ ಏನಿದೆ
ಇಲ್ಲೇ ಅಂತೆ,
ಸಿಹಿಯಾದ ಬತ್ತ
ಬೆಳೆಯುತ್ತಿದ್ದಿದ್ದು
ಅದಕ್ಕೆ ಅಲ್ಲವೇ ಆ ಊರಿಗೆ
ಸಿಹಿ ನೆಲ್ ವಾಗಿಲು ಅಂದಿದ್ದು
ಏನು "ಶ್ರೀನಿವಾಗಿಲು" ಅಂತ ಬರೆದಿದೆಯೇ ಅಲ್ಲಿ ?
ಅದು ತದ್ಭವ ತತ್ಸಮ ಅಲ್ಲ.
ಶತಮಾನಗಳಿಂದ ಆದ ಅಫಬ್ರಂಶವಷ್ಟೇ
ಇದರ ನಡುವೇ ಬತ್ತವೂ ಕಾಣೆಯಷ್ಟೇ
ಕಂಡ ಹಸಿರೆಗೆ
ಖುಷಿ ಪಟ್ಟಿಕೊಳ್ಳಬೇಕಷ್ಟೆ !!!
ಆತ್ಮಬಲಿ
ಅಯ್ಯೋ....
ಇವರೇಕೆ ಹಾಗೆ ಮಾಡಿಕೊಂಡರು?
ಆತ್ಮಹತ್ಯೆಯೇ ಅದು?
ಅಲ್ಲ ಅಲ್ಲ “ಆತ್ಮಬಲಿ”ಯೆನ್ನಿ.
ಅವರು
“ಜೀವ ಬಿಟ್ಟಿದ್ದಲ್ಲ,ಜೀವ ಕೊಟ್ಟಿದ್ದು”.
ಊರಿಗೆ, ಊರಿನ ಜನರ ಏಳ್ಗೆಗೆ!
ಅದಕ್ಕೆ ಅಲ್ಲವೇ
ದೇವಾಲಯದ ಎದುರಿಗೇ
ಆತ್ಮಬಲಿಯ
"ಆ ವೀರಗಲ್ಲುಗಳು" !!!
ಅದು,
ಶಾಸನಗಳ ವಿಶ್ವವಿದ್ಯಾಲಯವೇ ?
ಒಂದಲ್ಲ....ಎರಡಲ್ಲ...
ಇಪ್ಪತ್ತಕ್ಕೂ ಹೆಚ್ಚು
ಶಾಸನಗಳಿಯಿದೆಲ್ಲ ಅಲ್ಲಿ.
ಒಂದೊಂದು ಶಾಸನವು,
ಇತಿಹಾಸಕ್ಕೆ ಒಂದೊಂದು ಕಿಟಕಿಯಲ್ಲವೇ ?
ದಾನ ಕೊಟ್ಟಿದ್ದಕ್ಕೆ,
ಸುಂಕ ಮನ್ನ ಮಾಡಿದ್ದಕ್ಕೆ,
ಮಾರುವುದಕ್ಕೆ,
ಮರು ಮಾಡುವುದಕ್ಕೆ,
ಇನ್ನು ಎಷ್ಟಿತ್ತೋ
ಬರೆಯುವುದಕ್ಕೆ
ಸಮಯ ಸಾಲಲಿಲ್ಲವೋ ?
ಜಾಗ ಸಾಲಲಿಲ್ಲವೋ ?
ಇರಲಿ ಬಿಡಿ,
ಬರೆದದ್ದನ್ನು ಓದಿಕೊಳ್ಳೋಣ
ಓದಿದ್ದನ್ನು ಅರಿತು ಕೊಳ್ಳೋಣ
ಅರಿತಿದ್ದನ್ನು…..
ಸಮಯ ಮುಗಿಯುತ್ತಾ ಬಂತಾ
“ನಮ್ಮ ಸಮಯ”ಕ್ಕೆ ಹೋಗಲು ?
ನಮ್ಮ ಸಮಯದ
ಮುಳ್ಳಿನ
ಹಿಂದಿನ ಚಕ್ರದಲ್ಲೇ ಅಲ್ಲವೇ
ನಾವೀಗ
ಗಿರಕಿ ಹೊಡೆಯುತ್ತಿರುವುದು.
ಇರಲಿ ಬಿಡಿ,
ಸಮಯದ ಲೆಕ್ಕಾಚಾರ
ಮುಂದೊಂದು ದಿನಕ್ಕೆ !
ಅಹಾಹ.. ಓಹೋಹೋ
ಓಹೋ... ಅಹಾ...
ಅದ್ಭುತಕ್ಕೆ ಕೊನೆಯಿಲ್ಲ
ಎಂತಹ ಕೆತ್ತನೆ !!
“ಅಮೋಘ”
ಅಂಬುವುದು ಕಮ್ಮಿಯೇ ?
ಗೋಪುರದ ಎತ್ತರಕ್ಕೂ ಮೀರಿ ...
ಗಗನಕ್ಕೆ ಏರಿ...
ಇರಬೇಕಿತ್ತಲ್ಲವೇ
ಇದರ ಕೀರ್ತಿ ಪತಾಕೆ?
ವೈರಾಗ್ಯವೇ ,
ಆಲಸ್ಯವೇ ಅಥವಾ
ಬಿಡುವಿರಲಿಲ್ಲವೇ?
ಕೆತ್ತನೆಗಳ ನಡುವೆ,
ಒಂದಾದರೂ ಶಿಲಾಶಾಸನ
ಬರೆಯಬಾರದೆ ಅವರು?
ಬರೆಯದೇ,
ನಮ್ಮ ಊಹೆಗೆ ಬಿಟ್ಟಿದ್ದಕ್ಕೇನೋ
ಉಳಿದಿರುವುದು.. ಮಹಾಪುರುಷನೊಬ್ಬನ
ಭುಜಕ್ಕೆ ಕಟ್ಟಿದ ಕತೆಗಳು !!
ಬೇಕಲ್ಲವೇ ಕತೆಯ
ತೂಕ ಹೊರುವ
ಬಲಿಷ್ಟವಾದೊಂದು ಭುಜ.
ಮತ್ತಿನ್ಯಾರದ್ದರು ಇಲ್ಲಿ
ಅದಕ್ಕೆ ಅವನೇ ಸರಿ ಬಿಡಿ !!
ಹೊತ್ತಿದ್ದಾನೆ ತೂಕವನ್ನು
ಆರೇಳು ಶತಮಾನ.
ಇನ್ನಾದರೂ..
ಕಡಿಮೆ ಮಾಡಬಾರದೆ
ಅವನ ಹೊರೆಯನ್ನ ?
ಮಾಡುವುದು
ಯಾರು ?
ಹೇಗೆ ?
ಯಾವಾಗ ?
ಇದೇನು
ಕಾಲಯಾನವೊ ?
ಪ್ರಶ್ನಯಾನವೋ ?
ಮತ್ತೆ ಪ್ರಶ್ನೆಯೇ !?
ಉತ್ತರವೆಲ್ಲಿ ?
ಸಮಯವಾಯಿತು ನಡೆಯಿರಿ...
ಪ್ರಶ್ನೆಗಳಿಗೆ ಉತ್ತರ
ಹುಡುಕಿಕೊಳ್ಳಬೇಕದ್ದು
“ನಮ್ಮದೆ ಸಮಯ”ದಲ್ಲಲ್ಲವೇ ?
ಹುಡುಕೋಣ ಬನ್ನಿ
ಉತ್ತರಿಸದ ಪ್ರಶ್ನೆಗಳನ್ನು,
ಕೆಲವಕ್ಕೆ ಉತ್ತರಗಳನ್ನು !!
-ಸಂತೋಷ್ ಮೂಗೂರು (ಸಂ.K)
Written based on conversation during Bengaluru time travel run 2025.
Thanks to the deep insights and triggers from Uday Kumar P L of Mythic Society during the run made time travel unique experience.
https://strava.app.link/1apZ3YiRMXb

Comments
Post a Comment