ಚಿತ್ರಾನ್ನ, ಚಿತ್ರಾನ್ನ... ಒಂದು ಚಿತ್ರಣ!
"ತಿಂಡಿಗೆ ಏನು ಇದೆ?"
"ಊಟಕ್ಕೆ ಏನು?"
"ಟೈಮ್ ಇಲ್ಲ, ಆದ್ರೂ ಏನಾದ್ರೂ ರುಚಿಕರವಾಗಿ ಬೇಕು."
"ಅಡಿಗೆ ಕಲಿಯೋಕೆ ಶುರು ಮಾಡ್ತಾ ಇದ್ದೀನಿ. ಮೊದಲಿಗೆ ಏನು ಟ್ರೈ ಮಾಡ್ಲಿ?"
ಪ್ರಶ್ನೆ ಯಾವುದೇ ಇರಲಿ, ಉತ್ತರ ಒಂದೇ—ಚಿತ್ರಾನ್ನ!
ತಿನ್ನೋದಷ್ಟೆ!
---
*ಬಣ್ಣ ಬಣ್ಣದ ಚಿನ್ನದ ಅನ್ನ*
ಚಿತ್ರ ವಿಚಿತ್ರವಾದ ತಿಂಡಿ-ತಿನಿಸುಗಳು... ಬೇಕೊ ಬೇಡವೋ ನೂರಾರು ಆಯ್ಕೆಗಳು ಕಣ್ಣ ಮುಂದೆ ಕಾಣುವ ಮುನ್ನ,
ಆಪ್ ಓಪನ್ ಮಾಡಿ ಕಳೆದು ಹೋಗೋ ಇವತ್ತಿನ ಕಾಲದ ಮುಂಚೆ, ಮನೆ ಮನೆಗಳಲ್ಲಿ, ಮನ ಮನದಲ್ಲಿ ಇದ್ದದ್ದು – ಚಿತ್ರಾನ್ನ.
ಚಿತ್ರಾನ್ನ ಒಂದು ಸರಳ, ಸುಲಭ, ಸುಂದರ, ರುಚಿಕರ ತಿಂಡಿ.
ಅಷ್ಟೇ ಅಲ್ಲ – ಕಪ್ಪು ಬೆಳಕಿನ ಎನಿಸೋ ಬದುಕಿನೊಳಗೆ ಬಣ್ಣ ಬಣ್ಣದ ಕನಸುಗಳ ಚಿತ್ರಣದಂತೆ.
---
ಉದುರು ಉದುರಾದ ಅನ್ನ,
ರುಚಿಗೆ ತಕ್ಕಷ್ಟು ಉಪ್ಪು,
ಹುಳಿಗೆ ನಿಂಬೆಯೋ, ಹಿರಳೆಯದೋ ರಸ,
ಹುರಿದ ಕಡಲೆ ಬೀಜ,
ಚಿಕ್ಕದಾಗಿ ಹೆಚ್ಚಿದ ಮೆಣಸಿನಕಾಯಿ,
ಹೊಂದಿಸಲು ಎಣ್ಣೆ,
ಅದು ಸಾಲದು ಅನ್ನೋಂತೆ ಬಾಣಲಿಯೊಳಗೆ ಬೆಚ್ಚನೆಯ ಅಪ್ಪುಗೆ,
ಒಂದಿಷ್ಟು ಉಗ್ಗರಣೆ,
ಇದು ಸಾಲದು ಎನಿಸಿದರೆ ಕತ್ತರಿಸಿದ ಈರುಳ್ಳಿ!
---
ಇಷ್ಟೆಲ್ಲ ಸರಳತೆಯ ಮಧ್ಯೆ, ಬೇಜಾರಾಗದಷ್ಟು ವೈವಿಧ್ಯತೆಯನ್ನು ಉಣಬಡಿಸುವ ಬಗೆ ಬಗೆಯ ಚಿತ್ರಾನ್ನಗಳು:
ನಿಂಬೆ, ಮಾವಿನಕಾಯಿ, ಹಿರಳೆ, ಮೆಂತೆ, ಕಾಯಿ ಸಾಸಿವೆ, ಸೋಪ್ಪು, ಉದ್ದಿನಬೇಳೆ, ಈರುಳ್ಳಿ, ಮೊಸರು (ಇದರ ಬಗ್ಗೆ ಇನ್ನೊಮ್ಮೆ ತಂಪು ಹೊತ್ತಲ್ಲಿ ಬರೆಯುವೆ),
ಪುಳಿಯೋಗರೆ (ರಾಮಾನುಜಾಚಾರ್ಯರ ಅನುಗ್ರಹ ಇದ್ದರೆ, ಮುಂದೊಮ್ಮೆ ಇದರ ಬಗ್ಗೆ ಮಾತಾಡೋಣ),
ಬ್ರೆಡ್ ಚಿತ್ರಾನ್ನ, ಚಿತ್ರಾನ್ನ ದೋಸೆ...
ಇನ್ನು ಎಷ್ಟೊಂದು ಚಿತ್ರಾನ್ನ!
ಅಷ್ಟೇ ಚಿತ್ರಾನ್ನ ಅಂತ ಬಿಟ್ಟು ಬಿಡಬಹುದು ಅಥವಾ...
---
ಚಿತ್ರಾನ್ನ ಅನ್ನೋದು...
"ನಿಜದ ಜೊತೆಗೆ, ಕಲ್ಪನೆಯ ಜೊತೆಗೆಗೂಡಿ, ಕನಸುಗಳ ಕಾಮನಬಿಲ್ಲು ಮೂಡಿಸುವ" ಕಥನದಂತೆ,
"ಸ್ವರ, ವ್ಯಂಜನ, ವಿರಾಮ, ಅಲ್ಪವಿರಾಮ, ರಾಗ ಸೇರಿಕೊಂಡು ಆಗೋ ಕಾವ್ಯದಂತೆ,"
"ಇರುವುದರಲ್ಲಿ, ರುಚಿಯಾದ್ದನ್ನ ಮಾಡೋಣ" ಅನ್ನೋ ಜೀವನ ಚಿಂತನೆಯಂತೆ,
"ಬಿಡಿ ಬಿಡಿಯಾಗಿ ಏನು ಅಲ್ಲದಿದ್ದರೂ,
ಹದವಾಗಿ ಸೇರಿಸಿದರೆ ಆಗುವುದು ಎಲ್ಲ" ಅನ್ನೋ ಸ್ಪಷ್ಟನೆ!
ಅಂತಾನೂ ಅಲೋಚಿಸಬಹುದು...
ಚಿತ್ರಾನ್ನ – ಸುಲಭ, ಸರಳ ಅನ್ನಿಸಿದರೂ ಎಲ್ಲರಿಗೂ ಒಲಿಯಲ್ಲ.
ಅದು ಒಂದು ಕಲೆ. ಒಲಿಸಿಕೊಳ್ಳಬೇಕಷ್ಟೆ!
---
#ಚಿತ್ರಾನ್ನ #ಬದುಕು #ChitrannaChronicles #waves
ಚಿತ್ರಾನ್ನದ ಕುರಿತು Dr.Dhananjaya, Vibha ಮತ್ತು Nagendra ಅವರು JJ Vjn WhatsApp ಗ್ರೂಪ್ ನಲ್ಲಿ ಕಳುಸಿಹಿದ ಮೆಸೇಜ್ಗಳಿಂದ ಉತ್ತೇಜನಗೊಂಡು ಬರೆದದ್ದು.
Comments
Post a Comment